Advertisement

Responsive Advertisement

ಸಾಗರ ಭಾಗದಲ್ಲಿ ಕಾಡಾನೆ ಪ್ರತ್ಯಕ್ಷ: ಗೌತಮಪುರ, ನಾಡವಳ್ಳಿ ಸುತ್ತಮುತ್ತ ಒಂಟಿ ಸಲಗದ ಆತಂಕ; ರೈತರಿಗೆ ಅರಣ್ಯ ಇಲಾಖೆ ಕಟ್ಟೆಚ್ಚರ!

 


ಸಾಗರ ಅನಿಸಿಕೆ ನ್ಯೂಸ್ :

ಮಲೆನಾಡಿನ ಹೆಬ್ಬಾಗಿಲು ಸಾಗರ ತಾಲೂಕಿನ ಜನವಸತಿ ಹಾಗೂ ಕೃಷಿ ಪ್ರದೇಶಗಳಲ್ಲಿ ಮತ್ತೆ ಕಾಡಾನೆಗಳ ಸಂಚಾರ ಆರಂಭವಾಗಿದ್ದು, ರೈತರು ಹಾಗೂ ಸ್ಥಳೀಯ ಜನರಲ್ಲಿ ಭೀತಿ ಹೆಚ್ಚಿಸಿದೆ. ತಾಲೂಕಿನ ಗೌತಮಪುರ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಒಂಟಿ ಸಲಗವೊಂದು ಬೀಡುಬಿಟ್ಟಿರುವ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ತುರ್ತು ಕರೆ ನೀಡಿದೆ.

ನೈನ್ ಎಂಎಂಎಸ್‌ನಿಂದ ಗೌತಮಪುರದವರೆಗೆ ಆನೆ ಹೆಜ್ಜೆ:

ಮೊನ್ನೆಯಷ್ಟೇ ತಾಲೂಕಿನ ನೈನ್ ಎಂಎಂಎಸ್ (9 MS) ಸಮೀಪದ  ರಾತ್ರಿ ವೇಳೆ ಸಂಚರಿಸಿದ್ದ ಕಾಡಾನೆಯೊಂದು, ಅರಸಾಳು ಮಾಣಿಕೇರೆ  ಆಸುಪಾಸಿನಲ್ಲಿ ಅಡಿಕೆ ತೋಟಗಳಲ್ಲಿ ಸಾಗಿಹೋಗಿತ್ತು ಎಂಬ ಸುದ್ದಿ ಸ್ಥಳೀಯರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅದೇ ಮಾರ್ಗವಾಗಿ ಆನೆ ಮುಂದೆ ಸಾಗಿ ಬೆಳ್ಳಂದೂರು ರಾಜ್ಯ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗೌತಮಪುರ, ಚನ್ನಾಪುರ ಹಾಗೂ ನಾಡವಳ್ಳಿ ಭಾಗಗಳಿಗೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ.

ಪೀರನಕಣಿವೆ ದಾಟಿ ಬೆಳ್ಳಂದೂರು ಕಾಡಿನತ್ತ ಪಯಣ:

ಸದ್ಯ ಲಭ್ಯವಾಗಿರುವ ಮಾಹಿತಿಯಂತೆ, ಒಂಟಿ ಸಲಗವು ಪೀರನಕಣಿವೆ ಮಾರ್ಗವಾಗಿ ಬೆಳ್ಳಂದೂರು ಅರಣ್ಯ ಪ್ರದೇಶದತ್ತ ತೆರಳಿದೆ. ಭದ್ರಾ ಅಭಯಾರಣ್ಯ ಹಾಗೂ ಆನೆ ಕಾರಿಡಾರ್ ಭಾಗದಿಂದ ಇತ್ತ ಬಂದಿರುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಆನೆಗಳು ಹಿಂಡು ಹಿಂಡಾಗಿ ಬರುವ ಆತಂಕವೂ ಎದುರಾಗಿದೆ.

ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ಈ ಆನೆಯು ಮುಂದಿನ ಹಂತದಲ್ಲಿ;
ನಾಡವಳ್ಳಿ, ಚನ್ನಾಪುರ, ಕುಡಿಗೇರಿ, ಲಾವಿಗೇರಿ, ಹುಲಿಯಪ್ಪನ ಕಣಿವೆ..

ಈ ಮಾರ್ಗಗಳಲ್ಲಿ ಸಂಚರಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ತೋಟ, ಗದ್ದೆ ಹಾಗೂ ಕಾಡಂಚಿನ ಜಾಗಗಳಲ್ಲಿ ಕೆಲಸ ಮಾಡುವ ರೈತರು ಮತ್ತು ದಾರಿಹೋಕರು ಸದಾ ಎಚ್ಚರಿಕೆಯಿಂದ ಇರಬೇಕಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿಯಿಂದ ಹದ್ದಿನ ಕಣ್ಣು:

ಅಂಬ್ಲಿಗೋಳ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ಆನೆಯ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟು ನಿರಂತರ ಪಹರೆ ನಡೆಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ, ಆನೆಯನ್ನು ಸುರಕ್ಷಿತವಾಗಿ ಕಾಡಿನೊಳಗೆ ಹಿಮ್ಮೆಟ್ಟಿಸಲು ಇಲಾಖೆ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ.

ಸಾರ್ವಜನಿಕರು ಮತ್ತು ರೈತರಿಗೆ ಪ್ರಮುಖ ಸೂಚನೆಗಳು:

ಒಂಟಿಯಾಗಿ ತಿರುಗಾಡಬೇಡಿ: ಮುಂಜಾನೆ ಹಾಗೂ ಸಂಜೆಯ ಕತ್ತಲ ಸಮಯದಲ್ಲಿ ಕಾಡಂಚಿನ ರಸ್ತೆ ಹಾಗೂ ತೋಟಗಳಿಗೆ ಒಂಟಿಯಾಗಿ ಹೋಗುವುದನ್ನು ತಪ್ಪಿಸಿ.

ಕೆಣಕುವ ಸಾಹಸ ಬೇಡ: ಎಲ್ಲಾದರೂ ಆನೆ ಅಥವಾ ಅದರ ಹೆಜ್ಜೆ ಗುರುತುಗಳು ಕಂಡುಬಂದರೆ, ಹತ್ತಿರ ಹೋಗಿ ಸೆಲ್ಫಿ ತೆಗೆಯುವುದು ಅಥವಾ ಕಲ್ಲು ಹೊಡೆದು ಕೆಣಕುವ ಕೆಲಸಕ್ಕೆ ಕೈಹಾಕಬೇಡಿ.

ಕೂಡಲೇ ಮಾಹಿತಿ ನೀಡಿ: ಕಾಡಾನೆಯ ಸುಳಿವು ಸಿಕ್ಕ ತಕ್ಷಣವೇ ಸಮೀಪದ ಅರಣ್ಯ ಸಿಬ್ಬಂದಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿ ಇಲಾಖೆಯೊಂದಿಗೆ ಕೈಜೋಡಿಸಿ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು