Advertisement

Responsive Advertisement

ಶಿವಮೊಗ್ಗದಲ್ಲಿ ಭೀಕರ ಹಿಟ್ & ರನ್: ವಾಕಿಂಗ್ ತೆರಳಿದ್ದ ಖಾಸಗಿ ಶಾಲಾ ಶಿಕ್ಷಕಿ ರೂಪಾ ಸಾವು; ಪರಾರಿಯಾಗುತ್ತಿದ್ದ ಕಾರು ಚಾಲಕನನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು!



ಶಿವಮೊಗ್ಗ (ಅನಿಸಿಕೆ ನ್ಯೂಸ್):

ನಗರದ ಹೊರವಲಯದ ಶ್ರೀರಾಮಪುರ ರಿಂಗ್ ರಸ್ತೆ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (ಹಿಟ್ ಅಂಡ್ ರನ್) ಗಂಭೀರವಾಗಿ ಗಾಯಗೊಂಡಿದ್ದ ಖಾಸಗಿ ಶಾಲಾ ಶಿಕ್ಷಕಿ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಗಾಡಿಕೊಪ್ಪದ ಸೈಂಟ್ ಜೋಸೆಫ್ಸ್ ಅಕ್ಷರಧಾಮ ಐಸಿಎಸ್‌ಇ ಶಾಲೆಯ ಶಿಕ್ಷಕಿ ಹಾಗೂ ಶಕ್ತಿದಾಮ ಲೇಔಟ್ ನಿವಾಸಿ ರೂಪಾ (41) ಎಂದು ಗುರುತಿಸಲಾಗಿದೆ.


ಘಟನೆಯ ವಿವರ (FIR ಮಾಹಿತಿ ಪ್ರಕಾರ):

ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಧಿಕೃತ ಎಫ್‌ಐಆರ್ ಪ್ರಕಾರ, ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ ಸುಮಾರು 6:15ರ ಸುಮಾರಿಗೆ ರೂಪಾ ಅವರು ತಮ್ಮ ಪುತ್ರನ ಜೊತೆ ಎಂದಿನಂತೆ ಶ್ರೀರಾಮಪುರ ರಿಂಗ್ ರಸ್ತೆ ಬಳಿ ವಾಕಿಂಗ್ ತೆರಳಿದ್ದರು. ಬೆಳಿಗ್ಗೆ 7:15ರ ಸುಮಾರಿಗೆ ಶಿವಮೊಗ್ಗ ಕಡೆಯಿಂದ ಸಾಗರದ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಬಿಳಿ ಬಣ್ಣದ ಮಾರುತಿ ಸುಜುಕಿ ಕಾರು, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರೂಪಾ ಅವರಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ತಲೆ, ಬೆನ್ನು ಮತ್ತು ಭುಜದ ಭಾಗಕ್ಕೆ ತೀವ್ರ ರಕ್ತಗಾಯಗಳಾಗಿದ್ದು, ಕಾರು ನಿಲ್ಲಿಸದೆ ಚಾಲಕ ಸ್ಥಳದಿಂದ ಅತಿ ವೇಗವಾಗಿ ಪರಾರಿಯಾಗಿದ್ದ. ಕೂಡಲೇ ಪುತ್ರ  ಹಾಗೂ ಸ್ಥಳೀಯರ ನೆರವಿನಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತಸ್ರಾವದಿಂದಾಗಿ ಚಿಕಿತ್ಸೆ ಫಲಿಸದೆ ಬೆಳಿಗ್ಗೆ 11:30ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು.

ಆಯನೂರಿನಲ್ಲಿ ಚೇಸ್ ಮಾಡಿ ಹಿಡಿದ ಸ್ಥಳೀಯರು:

ಅಪಘಾತವೆಸಗಿ ನಿಲ್ಲಿಸದೆ ಪರಾರಿಯಾಗುತ್ತಿದ್ದ ಕಾರನ್ನು ಗಮನಿಸಿದ ಮೂರ್ನಾಲ್ಕು ಜನ ಸ್ಥಳೀಯ ಯುವಕರು ತಕ್ಷಣವೇ ತಮ್ಮ ವಾಹನದಲ್ಲಿ ಬೆನ್ನಟ್ಟಿದ್ದಾರೆ. ಸುಮಾರು ಕಿಲೋಮೀಟರ್‌ಗಳ ದೂರ ಚೇಸ್ ಮಾಡಿ, ಆಯನೂರು ಬಳಿ ಆ ಕಾರನ್ನು ಅಡ್ಡಗಟ್ಟಿ, ಚಾಲಕನನ್ನು ವಶಕ್ಕೆ ಪಡೆದು ಘಟನಾ ಸ್ಥಳಕ್ಕೆ ಕರೆತಂದಿದ್ದಾರೆ. ಆ ಬಳಿಕವೂ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸಾರ್ವಜನಿಕರು ಆತನನ್ನು ತುಂಗಾ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಪ್ರಕರಣ ದಾಖಲು - ಶಾಲಾ ವಲಯದಲ್ಲಿ ಆಘಾತ:

ಘಟನೆ ಸಂಬಂಧ ಮೃತರ ಪತಿ  ಅವರು ನೀಡಿದ ದೂರಿನ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.

ಕರ್ತವ್ಯನಿಷ್ಠ ಶಿಕ್ಷಕಿ ರೂಪಾ ಅವರ ಅಕಾಲಿಕ ನಿಧನಕ್ಕೆ ಸೈಂಟ್ ಜೋಸೆಫ್ಸ್ ಅಕ್ಷರಧಾಮ ಶಾಲಾ ಆಡಳಿತ ಮಂಡಳಿ, ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿ ವೃಂದ ತೀವ್ರ ಕಂಬನಿ ಮಿಡಿದಿದೆ. ಬೆಳಗಿನ ಜಾವ ವಾಕಿಂಗ್ ತೆರಳುವ ನಾಗರಿಕರ ಸುರಕ್ಷತೆಗೆ ಹೆದ್ದಾರಿ ಹಾಗೂ ರಿಂಗ್ ರಸ್ತೆಗಳಲ್ಲಿ ಸೂಕ್ತ ಬ್ಯಾರಿಕೇಡ್ ಮತ್ತು ವೇಗ ನಿಯಂತ್ರಕಗಳನ್ನು ಅಳವಡಿಸಬೇಕೆಂದು ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು