Advertisement

Responsive Advertisement

ಶಿವಮೊಗ್ಗ: ಅಣ್ಣಾನಗರ ಚಾನೆಲ್ ಬಳಿ ಯುವಕನ ಶವ ಪತ್ತೆ; ಕೊಲೆ ಶಂಕೆ, ದೊಡ್ಡಪೇಟೆ ಪೊಲೀಸರ ತನಿಖೆ ಚುರುಕು



ಅನಿಸಿಕೆ ನ್ಯೂಸ್ (ಶಿವಮೊಗ್ಗ):

ಶಿವಮೊಗ್ಗ ನಗರದ ಅಣ್ಣಾನಗರದ ಚಾನೆಲ್ ಸಮೀಪ ಯುವಕನೊಬ್ಬನ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಹಲ್ಲೆ ನಡೆಸಿ ಕೊಲೆ ಮಾಡಿರಬಹುದು ಎಂಬ ಪ್ರಬಲ ಶಂಕೆ ವ್ಯಕ್ತವಾಗಿದೆ.

ಮೃತ ಯುವಕನನ್ನು ನಗರದ ಅಶೋಕನಗರದ ನಿವಾಸಿ, ಗಾರೆ ಕೆಲಸಗಾರ ಹುಸ್ಮಾನ್ ಅಲಿ (35) ಎಂದು ಗುರುತಿಸಲಾಗಿದೆ.

ಮದ್ಯಪಾನದ ವೇಳೆ ಗಲಾಟೆ? ಕೊಲೆ ಶಂಕೆ:

ಮೃತ ಹುಸ್ಮಾನ್ ಅಲಿ ಅವರು ಕೆಲವರೊಂದಿಗೆ ಸೇರಿ ಹೊರಗಡೆ ಮದ್ಯಪಾನ ಮಾಡುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ಗಲಾಟೆ ಸಂಭವಿಸಿದೆ ಎನ್ನಲಾಗಿದೆ. ಇದೇ ವೇಳೆ ಅವರ ಮೇಲೆ ತೀವ್ರ ಹಲ್ಲೆ ನಡೆಸಿ ಹತ್ಯೆಗೈದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಆದರೆ ಈ ಘಟನೆ ಚಾನೆಲ್ ಬಳಿಯೇ ನಡೆದಿದೆಯೇ ಅಥವಾ ಬೇರೆಡೆ ನಡೆದು ಇಲ್ಲಿಗೆ ತಂದು ಹಾಕಲಾಗಿದೆಯೇ ಎಂಬ ಬಗ್ಗೆಯೂ ಅನುಮಾನಗಳು ಮೂಡಿವೆ.


ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರ ಭೇಟಿ, ಪರಿಶೀಲನೆ:

ವಿಷಯ ತಿಳಿಯುತ್ತಿದ್ದಂತೆಯೇ ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಇದು ಕೊಲೆಯೋ ಅಥವಾ ಸಾವಿಗೆ ಬೇರೆ ಯಾವುದಾದರೂ ಕಾರಣವಿದೆಯೇ? ಈ ಕೃತ್ಯದಲ್ಲಿ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ಬೆಳಕಿಗೆ ಬರಬೇಕಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು