Advertisement

Responsive Advertisement

ದೀಪಾವಳಿ ಬಳಿಕ ಯುಪಿಐ ವಹಿವಾಟಿಗೆ ಶುಲ್ಕ ಜಾರಿ: ಸಾಮಾನ್ಯ ಗ್ರಾಹಕರಿಗೆ ಶುಲ್ಕವಿದೆಯೇ? ಯಾರಿಗೆ ಅನ್ವಯ, ಯಾರಿಗೆ ವಿನಾಯಿತಿ? ಇಲ್ಲಿದೆ ಪೂರ್ಣ ಲೆಕ್ಕಾಚಾರ


 
ನವದೆಹಲಿ / ಶಿವಮೊಗ್ಗ (ಅನಿಸಿಕೆ ನ್ಯೂಸ್):

ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯ ಬೆನ್ನೆಲುಬಾಗಿರುವ ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಅಕ್ಟೋಬರ್ 15 ರಿಂದ ಜಾರಿಗೆ ಬರಬೇಕಿದ್ದ ಆಯ್ದ ವ್ಯಾಪಾರಿ ವಹಿವಾಟುಗಳ ಮೇಲಿನ ಎಂಡಿಆರ್ (MDR - Merchant Discount Rate) ಶುಲ್ಕವನ್ನು ದಸರಾ-ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರಿಗಳ ಮನವಿಗೆ ಸ್ಪಂದಿಸಿ, ನವೆಂಬರ್ ಎರಡನೇ ವಾರಕ್ಕೆ ಮುಂದೂಡಲಾಗಿದೆ.

ಹಬ್ಬದ ಋತುವಿನಲ್ಲಿ ವ್ಯಾಪಾರ ವಹಿವಾಟು ಗರಿಷ್ಠ ಮಟ್ಟದಲ್ಲಿರುವುದರಿಂದ ಯಾವುದೇ ಗೊಂದಲ ಉಂಟಾಗಬಾರದು ಹಾಗೂ ಪಾವತಿ ಸಂಸ್ಥೆಗಳಿಗೆ ತಾಂತ್ರಿಕ ಅಪ್‌ಡೇಟ್‌ಗೆ ಕಾಲಾವಕಾಶ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಪಿಸಿಐ ತಿಳಿಸಿದೆ.

ಸಾಮಾನ್ಯ ಗ್ರಾಹಕರು ಆತಂಕಪಡಬೇಕಿಲ್ಲ: ಯಾರಿಗೆ ಸಂಪೂರ್ಣ ಉಚಿತ?

ಈ ಶುಲ್ಕ ಜಾರಿಯಿಂದ ಜನಸಾಮಾನ್ಯರಿಗೆ ಯಾವುದೇ ಹೊರೆ ಬೀಳುವುದಿಲ್ಲ ಎಂಬುದನ್ನು ಎನ್‌ಪಿಸಿಐ ಸ್ಪಷ್ಟಪಡಿಸಿದೆ.

ಗ್ರಾಹಕರಿಗೆ ಸಂಪೂರ್ಣ ಉಚಿತ: ಯಾವುದೇ ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ಯುಪಿಐ ಮೂಲಕ ಪಾವತಿ ಮಾಡುವಾಗ ಸಾಮಾನ್ಯ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕ ಕಡಿತವಾಗುವುದಿಲ್ಲ.

ವ್ಯಕ್ತಿಯಿಂದ ವ್ಯಕ್ತಿಗೆ ವರ್ಗಾವಣೆ (P2P): ಸ್ನೇಹಿತರು, ಸಂಬಂಧಿಕರು ಅಥವಾ ಇತರರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವುದು ಎಂದಿನಂತೆ ಸಂಪೂರ್ಣ ಉಚಿತವಾಗಿರುತ್ತದೆ.

ಸಣ್ಣ ವ್ಯಾಪಾರಿಗಳಿಗೆ ರಿಲೀಫ್: ತಿಂಗಳಿಗೆ ₹ 1ಲಕ್ಷದವರೆಗೆ ಕ್ಯೂಆರ್ (QR) ಕೋಡ್ ಮೂಲಕ ವಹಿವಾಟು ನಡೆಸುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಯಾವ ವಹಿವಾಟಿಗೆ ಎಷ್ಟು ಶುಲ್ಕ? (ಕೇವಲ ವ್ಯಾಪಾರಿಗಳಿಗೆ ಮಾತ್ರ):


₹2,೦೦೦ ವರೆಗಿನ ವಹಿವಾಟು: ಯಾವುದೇ ಎಂಡಿಆರ್ ಶುಲ್ಕವಿರುವುದಿಲ್ಲ (ಶೂನ್ಯ ಶುಲ್ಕ).

₹2,೦೦೦ ಕ್ಕಿಂತ ಹೆಚ್ಚಿನ ವ್ಯಾಪಾರಿ ಪಾವತಿ: ಶೇಕಡ ೦.4% MDR ಅನ್ವಯವಾಗುತ್ತದೆ.

ಗರಿಷ್ಠ ಶುಲ್ಕದ ಮಿತಿ: ₹75,೦೦೦ ಅಥವಾ ಅದಕ್ಕಿಂತ ಹೆಚ್ಚಿನ ದೊಡ್ಡ ಮೊತ್ತದ ವಹಿವಾಟುಗಳಿಗೂ ಗರಿಷ್ಠ ಶುಲ್ಕ ₹300ಕ್ಕೆ ಸೀಮಿತವಾಗಿರುತ್ತದೆ.

ಅಗತ್ಯ ಸೇವೆಗಳಿಗೆ ಫಿಕ್ಸ್ಡ್ ರೇಟ್: ರೈಲ್ವೆ ಟಿಕೆಟ್, ಟೆಲಿಕಾಂ ಬಿಲ್, ವಿಮೆ, ಪೆಟ್ರೋಲ್-ಡೀಸೆಲ್ ಮತ್ತು ಕೃಷಿ ಪರಿಕರಗಳ ಖರೀದಿಗೆ ₹2,೦೦೦ ಕ್ಕಿಂತ ಹೆಚ್ಚಿದ್ದರೆ ಶೇಕಡಾವಾರು ಬದಲಾಗಿ ಕೇವಲ ₹5 ಸ್ಥಿರ ಶುಲ್ಕ ವಿಧಿಸಲಾಗುತ್ತದೆ.

ಬಂಡವಾಳ ಮಾರುಕಟ್ಟೆ (ಷೇರು/ಮ್ಯೂಚುವಲ್ ಫಂಡ್): ಮ್ಯೂಚುವಲ್ ಫಂಡ್, ಸ್ಟಾಕ್ ಬ್ರೋಕರ್ ಪಾವತಿಗಳಿಗೆ ೦.೦2% MDR (ಗರಿಷ್ಠ ₹3೦೦) ಇರುತ್ತದೆ.

ಶುಲ್ಕ ವಿಧಿಸಲು ಸರ್ಕಾರದ ಕಾರಣವೇನು?

ಯುಪಿಐ ನೆಟ್‌ವರ್ಕ್ ನಿರ್ವಹಣೆ, ಸರ್ವರ್ ಸಾಮರ್ಥ್ಯ ಹೆಚ್ಚಳ, ಸೈಬರ್ ಭದ್ರತೆ ಮತ್ತು ವಂಚನೆ ತಡೆ ವ್ಯವಸ್ಥೆಗೆ ವಾರ್ಷಿಕವಾಗಿ ಸುಮಾರು ₹2೦,೦೦೦ ಕೋಟಿಗೂ ಅಧಿಕ ವೆಚ್ಚವಾಗುತ್ತಿದೆ. ಕೇವಲ ಸರ್ಕಾರದ ಸಬ್ಸಿಡಿಯಿಂದಲೇ ಈ ಬೃಹತ್ ಡಿಜಿಟಲ್ ಜಾಲವನ್ನು ದೀರ್ಘಕಾಲ ನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಈ ಸುಸ್ಥಿರ ಹೆಜ್ಜೆ ಇಡಲಾಗಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು