ಅನಿಸಿಕೆ ನ್ಯೂಸ್ (ಸಾಗರ/ಶಿವಮೊಗ್ಗ):
ಪ್ರಸಿದ್ಧ ಆನ್ಲೈನ್ ಶಾಪಿಂಗ್ ತಾಣ 'ಮೀಶೋ' (Meesho) ಹೆಸರಿನಲ್ಲಿ ನಕಲಿ ಲಕ್ಕಿ ಡ್ರಾ ಆಮಿಷವೊಡ್ಡಿ ಸಾಗರ ನಗರದ ಜ್ಯೂಸ್ ಅಂಗಡಿ ಮಾಲೀಕರಾದ ಮಹಿಳೆಯೊಬ್ಬರಿಂದ ಹಂತ-ಹಂತವಾಗಿ ಬರೊಬ್ಬರಿ 23,40,179 ರೂಪಾಯಿ ಹಣವನ್ನು ದೋಚಿರುವ ಗಂಭೀರ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಜಿಲ್ಲಾ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಸೈಬರ್ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ಪೀಡ್ ಪೋಸ್ಟ್ ಮೂಲಕ ಬಂದಿತ್ತು ನಕಲಿ ಸ್ಕ್ರ್ಯಾಚ್ ಕಾರ್ಡ್!
ಸಂತ್ರಸ್ತ ಮಹಿಳೆಗೆ ಕೆಲ ದಿನಗಳ ಹಿಂದೆ 'ಮೀಶೋ ಆನ್ಲೈನ್ ಶಾಪಿಂಗ್' ಕಂಪನಿಯ 10ನೇ ವಾರ್ಷಿಕೋತ್ಸವದ ಹೆಸರಿನಲ್ಲಿ ನಕಲಿ ಸ್ಪೀಡ್ ಪೋಸ್ಟ್ ಪತ್ರವೊಂದು ತಲುಪಿತ್ತು. ಆ ಪತ್ರದಲ್ಲಿ, "ಕಂಪನಿಯ ನೋಂದಾಯಿತ ಗ್ರಾಹಕರಿಗಾಗಿ ವಿಶೇಷ ಲಕ್ಕಿ ಡ್ರಾ ಏರ್ಪಡಿಸಲಾಗಿದ್ದು, ಅದರಲ್ಲಿ ನೀವು ಆಯ್ಕೆಯಾಗಿದ್ದೀರಿ. ಪತ್ರದಲ್ಲಿರುವ ಕಾರ್ಡ್ ಸ್ಕ್ರ್ಯಾಚ್ ಮಾಡಿ ಬಹುಮಾನ ಪರಿಶೀಲಿಸಿ" ಎಂದು ತಿಳಿಸಲಾಗಿತ್ತು. ಅಲ್ಲದೆ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಾಟ್ಸಾಪ್ ಮೂಲಕ ದಾಖಲೆ ಕಳುಹಿಸುವಂತೆ ಸೂಚಿಸಲಾಗಿತ್ತು.
ಮಹಿಳೆ ಆ ಕಾರ್ಡ್ ಸ್ಕ್ರ್ಯಾಚ್ ಮಾಡಿದಾಗ "ಪ್ರಥಮ ಬಹುಮಾನವಾಗಿ ಮಹೀಂದ್ರಾ ಕಾರು ಗೆದ್ದಿದ್ದೀರಿ" ಎಂದು ಬಂದಿದೆ. ಇದನ್ನು ನಂಬಿದ ಮಹಿಳೆ, ಸೂಚಿಸಲಾಗಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಮ್ಮ ಪ್ಯಾನ್ ಕಾರ್ಡ್ ಹಾಗೂ ಭಾವಚಿತ್ರವನ್ನು ಕಳುಹಿಸಿಕೊಟ್ಟಿದ್ದಾರೆ.
ಕಾರಿನ ಬದಲು ಹಣದ ಆಮಿಷ: ಹಂತ ಹಂತವಾಗಿ ₹23.40 ಲಕ್ಷ ಲೂಟಿ!
ಇದಾದ ಬಳಿಕ ಮಹಿಳೆಗೆ ಕರೆ ಮಾಡಿದ ಖದೀಮರು, "ನಿಮಗೆ ಪ್ರಥಮ ಬಹುಮಾನವಾಗಿ ಮಹೀಂದ್ರಾ ಕಾರು ಬಂದಿದೆ. ನಿಮಗೆ ಕಾರು ಬೇಕೋ ಅಥವಾ ಕಾರಿನ ಮೌಲ್ಯದ ₹24,85,980 ನಗದು ಹಣ ಬೇಕೋ?" ಎಂದು ನಂಬಿಸಿದ್ದಾರೆ. ತಮ್ಮ ಬಳಿ ಈಗಾಗಲೇ ಕಾರು ಇರುವುದರಿಂದ ಹಣವನ್ನೇ ನೀಡಿ ಎಂದು ಮಹಿಳೆ ತಿಳಿಸಿದ್ದಾರೆ.
ಅದನ್ನೇ ಬಂಡವಾಳವಾಗಿಸಿಕೊಂಡ ವಂಚಕರು, ಬಹುಮಾನದ ಹಣ ಬ್ಯಾಂಕ್ ಖಾತೆಗೆ ಜಮೆಯಾಗಬೇಕಾದರೆ ಪ್ರೊಸೆಸಿಂಗ್ ಶುಲ್ಕ, ತೆರಿಗೆ (GST), ನೋಂದಣಿ ಶುಲ್ಕ ಮುಂತಾದ ವಿವಿಧ ನೆಪಗಳನ್ನು ಹೇಳಿ ಸಂತ್ರಸ್ತ ಮಹಿಳೆಯಿಂದ ಹಂತ-ಹಂತವಾಗಿ ಬರೋಬ್ಬರಿ 23,40,179 ರೂ. ಹಣವನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಎಷ್ಟು ಹಣ ನೀಡಿದರೂ ಬಹುಮಾನದ ಹಣ ಕೈಸೇರದಿದ್ದಾಗ ಸಂಶಯಗೊಂಡ ಮಹಿಳೆ, ತಾವು ಸೈಬರ್ ಜಾಲದ ಬಲೆಗೆ ಬಿದ್ದಿರುವುದನ್ನು ಅರಿತು ಕಂಗಾಲಾಗಿದ್ದಾರೆ.
ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲು, ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ:
ತಮಗೆ ವಂಚನೆಯಾಗಿರುವುದು ಖಚಿತವಾಗುತ್ತಿದ್ದಂತೆ ಮಹಿಳೆ ಸೆಪ್ಟೆಂಬರ್ ೩೦ ರಂದು ಶಿವಮೊಗ್ಗ ಸಿಇಎನ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಕಲಂ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 318(4), 319(2) ಅಡಿಯಲ್ಲಿ ಅಪರಿಚಿತ ಖದೀಮರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸೈಬರ್ ಎಚ್ಚರಿಕೆ:
ಯಾವುದೇ ಇ-ಕಾಮರ್ಸ್ ಕಂಪನಿಗಳು ಅಂಚೆ ಮೂಲಕ ಸ್ಕ್ರ್ಯಾಚ್ ಕಾರ್ಡ್ ಕಳುಹಿಸಿ ಹಣ ಅಥವಾ ಕಾರು ನೀಡುವುದಿಲ್ಲ. ಇಂತಹ ನಕಲಿ ಪತ್ರಗಳು, ಲಕ್ಕಿ ಡ್ರಾ ಕರೆಗಳು ಹಾಗೂ ಅಪರಿಚಿತ ಲಿಂಕ್ಗಳನ್ನು ಸಾರ್ವಜನಿಕರು ನಂಬಬಾರದು ಎಂದು ಸೈಬರ್ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಎಚ್ಚರವೇ ರಕ್ಷೆ; ಆನ್ಲೈನ್ ಆಮಿಷಗಳಿಗೆ ಬೀಳದಿರಿ!
ಬೆವರು ಸುರಿಸಿ ಕಷ್ಟಪಟ್ಟು ಸಂಪಾದಿಸಿದ ನಿಮ್ಮ ಹಣದ ಮೇಲೆ ಸೈಬರ್ ವಂಚಕರ ಕಣ್ಣು ಬಿದ್ದಿದೆ. ಬ್ಯಾಂಕ್ ಅಧಿಕಾರಿಯ ಹೆಸರಿನಲ್ಲಿ ಬರುವ ಕರೆಗಳು, ನಕಲಿ ಲಕ್ಕಿ ಡ್ರಾ ಸಂದೇಶಗಳು, ಅಪರಿಚಿತ ಇಮೇಲ್ಗಳು ಅಥವಾ ಒರಿಜಿನಲ್ ಬ್ಯಾಂಕ್ ವಾಟ್ಸಾಪ್ ಮೆಸೇಜ್ ರೀತಿಯೇ ಕಾಣುವ ನಕಲಿ ಲಿಂಕ್ಗಳ ಬಗ್ಗೆ ಸದಾ ಜಾಗೃತರಾಗಿರಿ.
ನೆನಪಿಡಿ: ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಕಂಪನಿಗಳು ಫೋನ್ ಕರೆ ಅಥವಾ ಸಂದೇಶಗಳ ಮೂಲಕ ಎಂದಿಗೂ ನಿಮ್ಮ OTP, ಪಾನ್ ಕಾರ್ಡ್, ಆಧಾರ್ ಕಾರ್ಡ್ ವಿವರಗಳು ಅಥವಾ ಪಿನ್ (PIN) ಸಂಖ್ಯೆಯನ್ನು ಕೇಳುವುದಿಲ್ಲ.
ಯಾವುದೇ ಅನುಮಾನಾಸ್ಪದ ಮೆಸೇಜ್ ಅಥವಾ ಮೇಲ್ ಬಂದಾಗ, ಗಾಬರಿಯಾಗಿ ಲಿಂಕ್ಗಳನ್ನು ಕ್ಲಿಕ್ ಮಾಡದೆ ನೇರವಾಗಿ ನಿಮ್ಮ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಿ.
ಒಂದು ವೇಳೆ ಸೈಬರ್ ವಂಚನೆ ಸಂಭವಿಸಿದರೆ ತಕ್ಷಣವೇ ಕೇಂದ್ರ ಸರ್ಕಾರದ ಸೈಬರ್ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಿ ಅಥವಾ
ಮೂಲಕ ದೂರು ದಾಖಲಿಸಿ.cybercrime.gov.in
ನಿಮ್ಮ ಭದ್ರತೆ ನಿಮ್ಮ ಕೈಯಲ್ಲಿದೆ. ಸ್ವಯಂ ಜಾಗೃತರಾಗಿ, ಇತರರಿಗೂ ಎಚ್ಚರಿಸಿ!
– ಸಾರ್ವಜನಿಕ ಹಿತಾಸಕ್ತಿಯೊಂದಿಗೆ 'ಅನಿಸಿಕೆ ನ್ಯೂಸ್'

.jpg)
0 ಕಾಮೆಂಟ್ಗಳು