Advertisement

Responsive Advertisement

ಹೊಸನಗರ ತಾಲೂಕಿನ ಕಮದೂರಿನಲ್ಲಿ ₹17 ಕೋಟಿ ವೆಚ್ಚದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಅ16 ರ ಶುಕ್ರವಾರ ಶಂಕುಸ್ಥಾಪನೆ: ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು ಭಾಗಿ!


 
ಹೊಸನಗರ / ಸಾಗರ (ಅನಿಸಿಕೆ ನ್ಯೂಸ್):
ಮಲೆನಾಡು ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಗೆ ಮಹತ್ವದ ಹೆಜ್ಜೆಯಿಡಲಾಗಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು, ಕೆರೆಹಳ್ಳಿ ಹೋಬಳಿ, ಕೆಂಚನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲವಳ್ಳಿ ಗ್ರಾಮದ ಕಮದೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ವತಿಯಿಂದ ನೂತನವಾಗಿ ನಿರ್ಮಾಣವಾಗಲಿರುವ "ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ"ಯ ಶಂಕುಸ್ಥಾಪನಾ ಸಮಾರಂಭವು ಅಕ್ಟೋಬರ್ 16ರ ಶುಕ್ರ ವಾರ ಸಂಜೆ 4:00 ಗಂಟೆಗೆ ಜರುಗಲಿದೆ.

8 ಎಕರೆ ಜಾಗ, ₹17 ಕೋಟಿ ವೆಚ್ಚದ ಸುಸಜ್ಜಿತ ಶೈಕ್ಷಣಿಕ ಸಂಕೀರ್ಣ:

ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ಮಕ್ಕಳಿಗೆ ಅತ್ಯುನ್ನತ ಮಟ್ಟದ ಉಚಿತ ವಸತಿ ಶಿಕ್ಷಣ ನೀಡುವ ಉದ್ದೇಶದಿಂದ, ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬಿ. ಗೋಪಾಲಕೃಷ್ಣ ಬೇಳೂರು ಅವರ ಮುತುವರ್ಜಿಯಿಂದ 8 ಎಕರೆ ವಿಸ್ತೀರ್ಣದ ಜಾಗವನ್ನು ಮಂಜೂರು ಮಾಡಿಸಿ, ₹17 ಕೋಟಿ ಅನುದಾನ ಒದಗಿಸಲಾಗಿದೆ. ಈ ಶಾಲಾ ಸಂಕೀರ್ಣದಲ್ಲಿ ಸುಸಜ್ಜಿತ ತರಗತಿ ಕೊಠಡಿಗಳು, ಹಾಸ್ಟೆಲ್, ಗ್ರಂಥಾಲಯ ಹಾಗೂ ಕ್ರೀಡಾಂಗಣ ತಲೆಯೆತ್ತಲಿದೆ.

ಸಚಿವರು ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿ:

ಕಾರ್ಯಕ್ರಮದ ಶಂಕುಸ್ಥಾಪನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಬಿ. ಗೋಪಾಲಕೃಷ್ಣ ಬೇಳೂರು ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕೆಂಚನಾಳ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಭಾಗವಹಿಸಲಿದ್ದಾರೆ. ಗ್ರಾಮೀಣ ಭಾಗದ ಶಿಕ್ಷಣದ ಅಭಿವೃದ್ಧಿಗೆ ಸಾಕ್ಷಿಯಾಗುವ ಈ ಸಮಾರಂಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಕೋರಿದ್ದಾರೆ
.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು