ಅನಿಸಿಕೆ ನ್ಯೂಸ್ (ಶಿವಮೊಗ್ಗ):
ನಗರದ ಹೊರವಲಯದ ಸಾಗರ ರಸ್ತೆಯ ಫ್ಲೈಓವರ್ ಸಮೀಪ ಬುಧವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸಾಗರ-ಆನಂದಪುರ ಶಿವಮೊಗ್ಗ ಮಾರ್ಗದ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಫ್ಲೈಓವರ್ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನ ಜಖಂಗೊಂಡಿದ್ದು, ಬೈಕ್‌ನಲ್ಲಿದ್ದ ಇಬ್ಬರು ರಸ್ತೆಗೆ ಬಿದ್ದು ತೀವ್ರ ರಕ್ತಸ್ರಾವದಿಂದ ಗಂಭೀರ ಸ್ಥಿತಿಯಲ್ಲಿದ್ದರು.
ಆಂಬುಲೆನ್ಸ್ ಮೂಲಕ ತಕ್ಷಣ ಆಸ್ಪತ್ರೆಗೆ ರವಾನೆ:
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಸವಾರರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ತುರ್ತು ಆಂಬುಲೆನ್ಸ್‌ಗೆ ಮಾಹಿತಿ ನೀಡಿ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಪಘಾತದ ಪರಿಣಾಮ ಸಾಗರ ಮುಖ್ಯ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರ ಭೇಟಿ, ಪರಿಶೀಲನೆ:
ವಿಷಯ ತಿಳಿದ ತಕ್ಷಣವೇ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಗಾಯಾಳುಗಳ ಸಂಪೂರ್ಣ ಗುರುತು ಹಾಗೂ ಘಟನೆಗೆ ಅತಿವೇಗ ಕಾರಣವೇ ಅಥವಾ ಅಜಾಗರೂಕತೆಯೇ ಎಂಬ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


.png)
0 ಕಾಮೆಂಟ್‌ಗಳು