Advertisement

Responsive Advertisement

ರಿಪ್ಪನ್‌ಪೇಟೆ: ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ಮಾಡಿ ಕನಸು ನನಸು ಮಾಡಿಕೊಂಡ ಯುವಕ ಸುದೀಪ್ ಇನ್ನಿಲ್ಲ; ಮಲೆನಾಡಿನ ಸ್ನೇಹಜೀವಿಯ ಅಗಲಿಕೆಗೆ ಗ್ರಾಮಸ್ಥರ ಹಾಗೂ ಸ್ನೇಹತರಲ್ಲಿ ಕಣ್ಣೀರು!


 ಅನಿಸಿಕೆ ನ್ಯೂಸ್ (ರಿಪ್ಪನ್‌ಪೇಟೆ):



ಕಂಡವರನ್ನೆಲ್ಲ ಆತ್ಮೀಯವಾಗಿ 'ಅಣ್ಣ' ಎಂದು ಕರೆದು ಪ್ರೀತಿಯಿಂದ ಮಾತನಾಡಿಸುತ್ತಿದ್ದ, ಸದಾ ಹಸನ್ಮುಖಿಯಾಗಿದ್ದ ರಿಪ್ಪನ್‌ಪೇಟೆ ಸಮೀಪದ ಮತ್ತಿಕೊಪ್ಪ ಗ್ರಾಮದ ಸ್ನೇಹಜೀವಿ ಯುವಕ ಸುದೀಪ್ (24) ವಿಧಿವಶರಾಗಿದ್ದಾರೆ. ಹೊಸನಗರ ತಾಲೂಕಿನ ಬೆಳೂರು ಗ್ರಾ.ಪಂ. ವ್ಯಾಪ್ತಿಯ ಮತ್ತಿಕೊಪ್ಪ ಗ್ರಾಮದ ಬಡ ಕೂಲಿ ಕಾರ್ಮಿಕರಾದ ಹಿರಿಯಣ್ಣ ಮತ್ತು ತಾರಾ ದಂಪತಿಯ ಪುತ್ರನಾಗಿದ್ದ ಸುದೀಪ್, ತೀವ್ರ ಅನಾರೋಗ್ಯದಿಂದ (ಮೂರ್ಛೆ ರೋಗದ ಹಿನ್ನೆಲೆಯಲ್ಲಿ ಬಿದ್ದು) ಸೆಪ್ಟೆಂಬರ್ 21ರಂದು ಕೊನೆಯುಸಿರೆಳೆದಿದ್ದಾರೆ. ಅವರ ಹಠಾತ್ ಅಗಲಿಕೆ ಇಡೀ ಗ್ರಾಮಸ್ಥರಲ್ಲಿ ಹಾಗೂ ಸ್ನೇಹಿತರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.


ಊರಿನ ಜನರ ಪ್ರೀತಿಯ ಗೆಳೆಯ:



ಸುದೀಪ್ ರಿಪ್ಪನ್‌ಪೇಟೆಯ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ಊರಿನ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಎದುರಿಗೆ ಯಾರು ಸಿಕ್ಕರೂ ಪ್ರೀತಿಯಿಂದ ಮಾತನಾಡಿಸಿ, ನಗುಮುಖದಿಂದಲೇ ಎಲ್ಲರ ಮನಗೆದ್ದಿದ್ದ ಈತ ಎಲ್ಲರಿಗೂ ಚಿರಪರಿಚಿತನಾಗಿದ್ದ. ಕಷ್ಟದಲ್ಲಿದ್ದರೂ ಯಾರಲ್ಲೂ ಬೇಸರ ತೋರದ ಈ ಯುವಕನ ಸರಳತೆ ಊರಿನ ಪ್ರತಿಯೊಬ್ಬರಿಗೂ ಹತ್ತಿರವಾಗಿತ್ತು.



ಪೋಸ್ಟ್‌ ಮ್ಯಾನ್ ನ್ಯೂಸ್ ಮೂಲಕ ಈಡೇರಿದ್ದ ಜೀವಮಾನದ ಕನಸು:
ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಇತ್ತೀಚೆಗೆ ಮಣಿಪಾಲ, ಮಂಗಳೂರು ಹಾಗೂ ಶಿವಮೊಗ್ಗದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಸದಾ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದ ಒಬ್ಬ ಒಳ್ಳೆಯ ಯುವಕನನ್ನು ಕಳೆದುಕೊಂಡ ನೋವು ಇಡೀ ಊರಿನ ಜನರನ್ನು ಕಾಡುತ್ತಿದೆ.



ಈ ಸಂಕಷ್ಟದ ನಡುವೆ ಸ್ಥಳೀಯ ಪತ್ರಕರ್ತ, 'ಪೋಸ್ಟ್‌ ಮ್ಯಾನ್ ನ್ಯೂಸ್' ಸಂಪಾದಕ ರಫಿ ರಿಪ್ಪನ್‌ಪೇಟೆ ಅವರು 2023ರಲ್ಲಿ ಸುದೀಪ್ ಅವರ ಅಭಿಮಾನ ಹಾಗೂ ಕುಟುಂಬದ ಬಡತನದ ಬಗ್ಗೆ ವಿಶೇಷ ವರದಿ ಪ್ರಕಟಿಸಿದ್ದರು. ಈ ವರದಿಗೆ ಸ್ವತಃ ನಟ ದರ್ಶನ್ ಅವರು ಸ್ಪಂದಿಸಿ, ಸುದೀಪ್ ಅವರನ್ನು ಮೈಸೂರಿಗೆ ಕರೆಸಿಕೊಂಡು ಪ್ರೀತಿಯಿಂದ ಮಾತನಾಡಿಸಿ ಧೈರ್ಯ ತುಂಬಿದ್ದರು. ಆ ಭೇಟಿಯ ಕ್ಷಣಗಳು ಸುದೀಪ್ ಅವರ ಬದುಕಿನ ಅತ್ಯಂತ ಅವಿಸ್ಮರಣೀಯ ನೆನಪಾಗಿ ಉಳಿದಿತ್ತು.




ಅನಿಸಿಕೆ ನ್ಯೂಸ್ ಶ್ರದ್ಧಾಂಜಲಿ:



ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಬಡ ಕುಟುಂಬಕ್ಕೆ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು 'ಅನಿಸಿಕೆ ನ್ಯೂಸ್' ಬಳಗ ಸಂತಾಪ ಸೂಚಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು