Advertisement

Responsive Advertisement

ಶಿವಮೊಗ್ಗದಲ್ಲಿ ಕಳಪೆ ಆಹಾರ ಮಳಿಗೆಗಳಿಗೆ ಶಿವಮೊಗ್ಗ ನಗರ ಉಪ ವಿಭಾಗಾಧಿಕಾರಿ ಎಸಿ ಡಾ. ಮೈತ್ರಿ ಶಾಕ್: ಕಿಚನ್‌ಗಳಿಗೆ ನುಗ್ಗಿ ಖಡಕ್ ತಪಾಸಣೆ; ಕೃತಕ ಬಣ್ಣ, ಅಸ್ವಚ್ಛತೆ ಕಂಡರೆ ಲೈಸೆನ್ಸ್ ರದ್ದು ಮಾಡುವ ಖಡಕ್ ವಾರ್ನಿಂಗ್!


 ಅನಿಸಿಕೆ ನ್ಯೂಸ್ (ಶಿವಮೊಗ್ಗ):

ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಹೋಟೆಲ್ ಹಾಗೂ ತಿನಿಸು ತಯಾರಿಕಾ ಕೇಂದ್ರಗಳಿಗೆ ಕಡಿವಾಣ ಹಾಕಲು ಶಿವಮೊಗ್ಗ ನಗರ ಉಪ ವಿಭಾಗಾಧಿಕಾರಿ (AC) ಡಾ. ಮೈತ್ರಿ ಅವರು ಕಣಕ್ಕಿಳಿದಿದ್ದಾರೆ. ನಗರದ ಪ್ರಮುಖ ಹೋಟೆಲ್‌ಗಳು ಹಾಗೂ ತಿನಿಸು ಮಾರಾಟ ಮಳಿಗೆಗಳ ಮೇಲೆ ಮಂಗಳವಾರ ಸಂಜೆ ಏಕಾಏಕಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ, ಗುಣಮಟ್ಟ ಹಾಗೂ ನೈರ್ಮಲ್ಯ ಉಲ್ಲಂಘಿಸಿದ ಮಳಿಗೆಗಳಿಗೆ ಲೈಸೆನ್ಸ್ ರದ್ದುಪಡಿಸುವ ಕಠಿಣ ಎಚ್ಚರಿಕೆ ನೀಡಿದೆ.

ಸಾರ್ವಜನಿಕರಿಂದ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಉಪ ವಿಭಾಗಾಧಿಕಾರಿಗಳ ತಂಡ, ನಗರದ ನಾಲ್ಕು ಪ್ರಮುಖ ಆಹಾರ ಕೇಂದ್ರಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಡುಗೆ ಕೋಣೆಗಳ ಒಳನುಗ್ಗಿ ವಾಸ್ತವ ಸ್ಥಿತಿಯನ್ನು ಕಣ್ಣಾರೆ ಪರಿಶೀಲಿಸಿ ಎಚ್ಚರಿಕೆ ನೀಡಿದರು.


ತಪಾಸಣೆ ವೇಳೆ ಬಯಲಾದ ಆಘಾತಕಾರಿ ಅಂಶಗಳು:

ಕಿಚನ್‌ಗಳಲ್ಲಿ ತೀವ್ರ ಅಸ್ವಚ್ಛತೆ:

ನಗರದ ಪ್ರಮುಖ ಹೋಟೆಲ್‌ಗಳ ಅಡುಗೆ ಕೋಣೆಗಳನ್ನು ಪರಿಶೀಲಿಸಿದಾಗ, ಪಾತ್ರೆ ತೊಳೆಯುವ ಸ್ಥಳಗಳಲ್ಲಿ ತೀವ್ರ ಅಸ್ವಚ್ಛತೆ ಕಂಡುಬಂದಿದೆ. ದಿನಾಂಕ ಮುಗಿದ ಹಾಲಿನ ಬಳಕೆ ಹಾಗೂ ಅಡುಗೆಗೆ ಕಳಪೆ ಗುಣಮಟ್ಟದ ಪಾಮ್ ಆಯಿಲ್ ಬಳಸುತ್ತಿರುವುದು ಕಂಡು ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿವಿಧ ಆಹಾರ ಪದಾರ್ಥಗಳ ಸ್ಯಾಂಪಲ್‌ಗಳನ್ನು ತಕ್ಷಣವೇ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಮಾಂಸಾಹಾರ ಹಾಗೂ ಜ್ಯೂಸ್ ಕೇಂದ್ರಗಳ ಪರಿಶೀಲನೆ:

ಹಲವು ಕಡೆಗಳಲ್ಲಿ ಹಣ್ಣಿನ ಜ್ಯೂಸ್ ತಯಾರಿಕೆಗೆ ಬಳಸುವ ಪದಾರ್ಥಗಳ ಗುಣಮಟ್ಟ ಕಳಪೆಯಾಗಿರುವುದು ಗಮನಕ್ಕೆ ಬಂತು. ಡೀಪ್ ಫ್ರೀಜರ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಮಾಂಸ, ಮೀನು ಹಾಗೂ ಯಾವುದೇ ವಿವರಗಳಿಲ್ಲದ ಲೇಬಲ್ ರಹಿತ ಉತ್ಪನ್ನಗಳನ್ನು ಮಾರಾಟಕ್ಕೆ ಇಟ್ಟಿರುವುದನ್ನು ಕಂಡು ಮಾಲೀಕರನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಬೇಕರಿ ಉತ್ಪನ್ನ, ಸಿಹಿತಿಂಡಿಗಳಿಗೆ ನಿಷೇಧಿತ ಬಣ್ಣದ ಬಳಕೆ:

ನಗರದ ವಿವಿಧ ಬೇಕರಿಗಳಿಗೆ ಸಿಹಿತಿಂಡಿ ಹಾಗೂ ಖಾರ ಪದಾರ್ಥಗಳನ್ನು ಪೂರೈಸುವ ಪ್ರಮುಖ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದಾಗ, ತಿನಿಸುಗಳಿಗೆ ಕೃತಕ ಹಾಗೂ ರಾಸಾಯನಿಕ ಬಣ್ಣಗಳನ್ನು ಅತಿಯಾಗಿ ಬೆರೆಸುತ್ತಿರುವುದು ಬೆಳಕಿಗೆ ಬಂದಿದೆ. "ಮಕ್ಕಳು ಇಷ್ಟಪಟ್ಟು ತಿನ್ನುವ ತಿಂಡಿಗಳಿಗೆ ಇಂತಹ ಬಣ್ಣ ಬೆರೆಸಿ ವಿಷ ನೀಡುತ್ತಿದ್ದೀರಾ?" ಎಂದು ಅಧಿಕಾರಿಗಳು ಆಕ್ರೋಶ ಹೊರಹಾಕಿದರು. ತಕ್ಷಣವೇ ಸ್ವಚ್ಛತೆ ಕಾಪಾಡದಿದ್ದರೆ ಅಂತಹ ಘಟಕಗಳನ್ನು ಮುಲಾಜಿಲ್ಲದೆ ಸೀಜ್ ಮಾಡುವುದಾಗಿ ಎಚ್ಚರಿಸಿದರು.

ಅವಧಿ ಮುಕ್ತಾಯ ಮಾಹಿತಿ ಇಲ್ಲದ ತಿನಿಸು ಪ್ಯಾಕೆಟ್‌ಗಳು:

ಹಲವು ಜನಪ್ರಿಯ ತಿನಿಸು ಮಳಿಗೆಗಳಲ್ಲಿ ಆಹಾರ ಪದಾರ್ಥಗಳನ್ನು ಅವೈಜ್ಞಾನಿಕವಾಗಿ ತೆರೆದಿಟ್ಟಿರುವುದು ಹಾಗೂ ತಯಾರಿಕಾ ದಿನಾಂಕ ಮತ್ತು ಅವಧಿ ಮುಕ್ತಾಯ ದಿನಾಂಕವೇ (Expiry Date) ಇಲ್ಲದ ತಿಂಡಿ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಯಿತು.

ತಪ್ಪಿದರೆ ಒಂದೇ ನಿಮಿಷದಲ್ಲಿ ಲೈಸೆನ್ಸ್ ರದ್ದು" — ಎಸಿ ಡಾ. ಮೈತ್ರಿ ಖಡಕ್ ಸಂದೇಶ:

ಪರಿಶೀಲನೆಯ ಬಳಿಕ ಮಾತನಾಡಿದ ಉಪ ವಿಭಾಗಾಧಿಕಾರಿ ಡಾ. ಮೈತ್ರಿ, "ಗ್ರಾಹಕರ ನಾಲಿಗೆ ರುಚಿ ಹೆಚ್ಚಿಸಲು ಟೇಸ್ಟಿಂಗ್ ಪೌಡರ್, ಲೇಬಲ್ ಇಲ್ಲದ ಬೆಣ್ಣೆ-ತುಪ್ಪ ಹಾಗೂ ಕಳಪೆ ಎಣ್ಣೆಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಇಂತಹ ಕೃತಕ ರುಚಿಕಾರಕಗಳು ನಿಧಾನವಾಗಿ ಜನರ ದೇಹಕ್ಕೆ ಸೇರುವ ವಿಷವಾಗಿದ್ದು, ಸಾರ್ವಜನಿಕರ ಜೀವದ ಮೇಲೆ ದುಷ್ಪರಿಣಾಮ ಬೀರುತ್ತವೆ. ಸದ್ಯಕ್ಕೆ ಮಾಲೀಕರು ಸರಿಪಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆ ತರುವಂತಹ ನಿರ್ಲಕ್ಷ್ಯ ಮುಂದುವರಿದರೆ, ಯಾವುದೇ ಮುಲಾಜಿಲ್ಲದೆ ಒಂದೇ ನಿಮಿಷದಲ್ಲಿ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಲಾಗುವುದು" ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು