ತೀರ್ಥಹಳ್ಳಿ: ಮಲೆನಾಡಿನ ಘಾಟಿಯ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರ ತಪ್ಪಿದರೆ ಎಷ್ಟು ದೊಡ್ಡ ಅನಾಹುತ ಆಗುತ್ತೆ ಅನ್ನೋದಕ್ಕೆ ಇಲ್ಲೊಂದು ಕಣ್ಣುಮುಂದಿನ ಸಾಕ್ಷಿ ಸಿಕ್ಕಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಮಾರ್ಗದ ಬಾಳೇಬೈಲು ಸಮೀಪ ಎರಡು ಕಾರುಗಳು ಸೀದಾಸೀದಾ ಮುಖಾಮುಖಿ ಗುದ್ದಿಕೊಂಡಿದ್ದು, ಕಾರ್‌ನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ.
ಘಟನೆ ನಡೆದಿದ್ದು ಹೇಗೆ? ಆಗುಂಬೆ ಕಡೆಗೆ ಹೋಗೋ ರಸ್ತೆಯಲ್ಲಿ ತಿರುವಿನಲ್ಲಿ ಬಾಳೇಬೈಲ್ ಹತ್ತಿರ ಎದುರುಬದುರಾಗಿ ಬರುತ್ತಿದ್ದ ಕಾರುಗಳು ನಿಯಂತ್ರಣ ಸಿಗದೆ ಒಂದಕ್ಕೊಂದು ಜೋರಾಗಿ ಡಿಕ್ಕಿ ಹೊಡೆದುಕೊಂಡಿವೆ. ಎದುರಿನಿಂದ ತಪ್ಪಾದ ದಿಕ್ಕಿನಲ್ಲಿ (ಆಪೋಸಿಟ್ ಡೈರೆಕ್ಷನ್) ರಭಸವಾಗಿ ಬಂದ ವ್ಯಾಗನಾರ್ ಕೆಂಪು ಕಾರನ್ನು ನೋಡಿ, ಇನ್ನೊಂದು ಕಾರಿನವರು ಅಪಘಾತ ತಪ್ಪಿಸಲು ತಕ್ಷಣ ರಸ್ತೆ ಅಂಚಿಗೆ ತಿರುಗಿಸಲು ಹರಸಾಹಸ ಪಟ್ಟಿದ್ದಾರೆ. ಆದರೂ ವೇಗ ಹೆಚ್ಚಿದ್ದ ಕಾರಣ ಎದುರಿನ ಕಾರು ನೇರವಾಗಿ ಬಂದು ಅಪ್ಪಳಿಸಿದೆ.
ಈ ಭೀಕರ ಅಪಘಾತದ ದೃಶ್ಯ ಅಲ್ಲೇ ಇದ್ದ ನ್ಯೂ ಬೆಂಗಳೂರು ಬೇಕರಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯ ನೋಡಿದ್ರೆ ಎದೆಯೂ ಝಲ್ ಎನ್ನುವಂತಿದೆ.
ನೆರವಿಗೆ ಧಾವಿಸಿದ ಸ್ಥಳೀಯರು:
ಡಿಕ್ಕಿಯಾದ ರಭಸಕ್ಕೆ ಭಾರಿ ಸದ್ದು ಕೇಳಿಬರುತ್ತಿದ್ದಂತೆ, ಸುತ್ತಮುತ್ತಲಿನ ಊರಿನ ಜನರು ತಕ್ಷಣವೇ ಸ್ಥಳಕ್ಕೆ ಓಡಿ ಬಂದಿದ್ದಾರೆ. ಕಾರಿನ ಒಳಗೆ ಸಿಲುಕಿ ತೀವ್ರ ಪೆಟ್ಟಾಗಿದ್ದ ಗಾಯಾಳುಗಳನ್ನು ಉಪಚರಿಸಿ, ಬೇರೆ ವಾಹನದ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
⚠️ ಅನಿಸಿಕೆ ನ್ಯೂಸ್ - ವಾಹನ ಸವಾರರ ಗಮನಕ್ಕೆ:
ತೀರ್ಥಹಳ್ಳಿ-ಆಗುಂಬೆ ರಸ್ತೆಯು ಕಡಿದಾದ ತಿರುವುಗಳು ಮತ್ತು ಇಳಿಜಾರುಗಳಿಂದ ಕೂಡಿದೆ. ತಿರುವುಗಳಲ್ಲಿ ಆಪೋಸಿಟ್ ದಾರಿಗೆ ನುಗ್ಗದೆ, ನಿಗದಿತ ವೇಗದಲ್ಲಿ ವಾಹನ ಚಲಾಯಿಸಿ ಜೀವ ರಕ್ಷಿಸಿಕೊಳ್ಳಿ.


0 ಕಾಮೆಂಟ್‌ಗಳು