Advertisement

Responsive Advertisement

ರಾಜ್ಯಕ್ಕೆ ವಿದ್ಯುತ್ ನೀಡಿದ ಹೊಸನಗರಕ್ಕೆ ‘ಕತ್ತಲೆ ನಗರ’ ಪಟ್ಟ; ಹಳೇ 33 ಕೆವಿ ಮಾರ್ಗದ ಗೋಳಿಗೆ ಕೊನೆಯೇ ಇಲ್ವಾ? ಗಟ್ಟಿಯಾಗುತ್ತಿದೆ ಮಲೆನಾಡ ಹೋರಾಟದ ಧ್ವನಿ.


 

ಅನಿಸಿಕೆ ನ್ಯೂಸ್ ವಿಶೇಷ ವರದಿ (ಹೊಸನಗರ):

ರಾಜ್ಯದ ಪ್ರಮುಖ ವಿದ್ಯುತ್ ಯೋಜನೆಗಳಾದ ಶರಾವತಿ, ವರಾಹಿ, ಸಾವೇಹಕ್ಲು ಹಾಗೂ ಚಕ್ರಾ ನದಿಗಳಿಗೆ ಅಣೆಕಟ್ಟು ಕಟ್ಟಲು ತಮ್ಮ ಹಸಿರು ಭೂಮಿ, ಮನೆ-ಮಠಗಳನ್ನು ಕಳೆದುಕೊಂಡು ಕೊಡುಗೆ ನೀಡಿದ ಸಂತ್ರಸ್ತ ಮಲೆನಾಡಿನ ನಡುಮನೆ ಖ್ಯಾತಿಯ ಹೊಸನಗರ ತಾಲೂಕಿನ ಜನತೆಗೆ ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ‘ವಿದ್ಯುತ್ ಭಾಗ್ಯ’ ಮಾತ್ರ ಗಗನಕುಸುಮವಾಗಿದೆ. ನಿತ್ಯವೂ ಕತ್ತಲೆಯಲ್ಲೇ ಕಳೆಯುವಂತಾಗಿರುವ ತಾಲೂಕಿನ ವಿದ್ಯುತ್ ಗೋಳಿನ ವಿರುದ್ದ, ದಶಕಗಳ ನಿಷ್ಕ್ರಿಯತೆಯ ನಂತರ ಕಡೆಗೂ ಈಗ ಹೋರಾಟದ ಧ್ವನಿ ಒಮ್ಮತವಾಗಿ ಗಟ್ಟಿಯಾಗತೊಡಗಿದೆ.

ವಿದ್ಯುತ್ ನೀಡಿದವರಿಗೆ ಕತ್ತಲೆ ಭಾಗ್ಯ — ಸರಕಾರಗಳ ಇಚ್ಚಾಶಕ್ತಿಯ ಕೊರತೆ:

ಹೊಸನಗರ ತಾಲೂಕಿನ ವಿದ್ಯುತ್ ಸಮಸ್ಯೆಯ ತೀವ್ರತೆ ಎಷ್ಟಿದೆಯೆಂದರೆ, ಸಾರ್ವಜನಿಕರು ಇದನ್ನು ‘ಕತ್ತಲೆ ನಗರ’ ಎಂದು ಹತಾಶೆಯಿಂದ ಹೆಸರಿಸಿಕೊಳ್ಳುವಂತಾಗಿದೆ. ಕಳೆದ ಏಳು ದಶಕಗಳಿಂದಲೂ ಆಳಿದ ಮತ್ತು ಆಳುತ್ತಿರುವ ಸರಕಾರಗಳು ಹಾಗೂ ಜನಪ್ರತಿನಿಧಿಗಳು ಈ ಭಾಗದ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾ ಬಂದಿದ್ದಾರೆ. ವಿದ್ಯುತ್ ಸಮಸ್ಯೆ ಪರಿಹರಿಸಲು ಯಾವುದೇ ದೃಢವಾದ ಕ್ಷೇತ್ರವೂ ಇಲ್ಲದೆ, ರಾಜಕೀಯ ಹೋರಾಟದ ಧ್ವನಿಯೂ ಮಾಯವಾಗಿರುವಾಗ ತಾಲೂಕು ಅಂಧಕಾರಕ್ಕೆ ದೂಡಲ್ಪಟ್ಟಿದೆ. ದಶಕಗಳಿಂದ ಅನುಭವಿಸುತ್ತಿರುವ ಈ ವಿದ್ಯುತ್ ಅವ್ಯವಸ್ಥೆಯ ವಿರುದ್ದ ಅಸಮಾಧಾನ ಸ್ಫೋಟಗೊಂಡಿದ್ದು, ವರ್ತಕ ಸಂಘದ ನೇತೃತ್ವದಲ್ಲಿ ದೊಡ್ಡ ಹೋರಾಟಕ್ಕೆ ತಾಲೂಕು ಸಜ್ಜಾಗುತ್ತಿದೆ.

33 ಕೆವಿ ಹಳೆ ಮಾರ್ಗದ ಗೋಳು: ಮಳೆ ಬಂದರೆ ಸಾಕು ಕತ್ತಲೆ!

ಪ್ರಸ್ತುತ ಹೊಸನಗರಕ್ಕೆ ಸಾಗರ ಉಪ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಮಾಡುವ 33 ಕೆವಿ ಮಾರ್ಗವು 1976-77ರ ಸುಮಾರಿಗೆ ನಿರ್ಮಾಣಗೊಂಡಿದೆ. ಈ ಮಾರ್ಗವು ಶರಾವತಿ ಹಿನ್ನೀರು ಪ್ರದೇಶ ಮತ್ತು ಆಕೇಶಿಯಾ ಅರಣ್ಯ ಭಾಗದಲ್ಲಿ ಸುಮಾರು 36.5 ಕಿ.ಮಿ. ದೂರ ಹಾದು ಬಂದಿದೆ. ಕೇವಲ 9 ಮೀಟರ್‌ಗಳಷ್ಟು ಎತ್ತರವಿರುವ ಈ ಮಾರ್ಗ ಮಳೆಗಾಲ ಬಂದರೆ ಸಾಕು ಬಿದಿರು ಅಥವಾ ಮರದ ಕೊಂಬೆಗಳು ಬಿದ್ದು ಸಂಪರ್ಕ ಕಡಿದು ಹೋಗುತ್ತದೆ ಹಿನ್ನೀರ ಪ್ರದೇಶ ಮತ್ತು ದಟ್ಟ ಅರಣ್ಯದಲ್ಲಿ ತುರ್ತು ಕಾಮಗಾರಿ ನಡೆಸುವುದು ಸಾಧ್ಯವಾಗದ ಕಾರಣ ಇಡೀ ತಾಲೂಕು ಮಳೆಗಾಲದ ಬಹುತೇಕ ದಿನಗಳನ್ನು ಕತ್ತಲೆಯಲ್ಲೇ ಕಳೆಯುವಂತಾಗಿದೆ. ಇದು ಒಂದು ವರ್ಷದ ಕತೆಯಲ್ಲ, ಪ್ರತಿ ವರ್ಷವೂ ಇದೇ ವ್ಯಥೆ ಮರುಕಳಿಸುತ್ತಿದೆ.

ನೆನಗುದಿಗೆ ಬಿದ್ದ 110 ಕೆವಿ ಟವರ್ ಮಾರ್ಗ — ತಪ್ಪಿದ ಯೋಜನೆಗಳು:

ಹೊಸನಗರದ ವಿದ್ಯುತ್ ಸಮಸ್ಯೆಗೆ ಏಕೈಕ ಶಾಶ್ವತ ಪರಿಹಾರವೆಂದರೆ ಸಾಗರ ಅಥವಾ ತೀರ್ಥಹಳ್ಳಿಯಂತೆ ಸುಮಾರು 13 ಮೀಟರ್‌ಗೂ ಹೆಚ್ಚು ಎತ್ತರವಿರುವ ಕಬ್ಬಿಣದ ಟವರ್‌ ಒಳಗೊಂಡ 110 ಕೆವಿ ಮಾರ್ಗವನ್ನು ನಿರ್ಮಿಸುವುದು. ದಶಕಗಳ ಹಿಂದೆ ಹಲವು ವರ್ಷಗಳ ಬೇಡಿಕೆ ಮತ್ತು ಜನರ ಆಗ್ರಹದ ಪ್ರತಿಫಲವಾಗಿ 110 ಕೆವಿ ಟವರ್ ವಿದ್ಯುತ್ ಮಾರ್ಗದ ಯೋಜನೆಯ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ, ಅಂದಿನ ಶಿವಮೊಗ್ಗ ಅಧೀಕ್ಷಕ ಎಂಜಿನಿಯರ್ (ಪಾಲನೆ ಮತ್ತು ನಿರ್ವಹಣೆ, ಮೆಸ್ಕಾಂ) ಅವರು 42 ಕಿ.ಮಿ. ಉದ್ದದ ಈ ಮಾರ್ಗ ರಚಿಸಲು ದಟ್ಟ ಅರಣ್ಯ ಪ್ರದೇಶ ಬರುವುದರಿಂದ ಯೋಜನೆ ಕಷ್ಟಸಾಧ್ಯ ಎಂದಿದ್ದರು. ಪರಿಣಾಮವಾಗಿ, ಉದ್ದೇಶಿತ 110 ಕೆವಿ ವಿದ್ಯುತ್ ಮಾರ್ಗದ ಪ್ರಸ್ತಾಪವನ್ನು ವೃತ್ತಮಟ್ಟದ ಮತ್ತು ವಲಯ ಮಟ್ಟದ ಸಂಯೋಜಕ ಸಮಿತಿ ಸಭೆಯಲ್ಲಿ ಕೈಬಿಡಲಾಯಿತು. ಆದರೆ ನಂತರದ ದಿನಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಈ ಮಾರ್ಗದ ಸಾಧ್ಯತೆ ಬಗ್ಗೆ ಆಶಾಭಾವನೆ ಮೂಡಿದ್ದರೂ, ಸರಕಾರಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಯೋಜನೆ ಇಂದಿಗೂ ನೆನಗುದಿಯಲ್ಲೇ ಇದೆ.

ಗಟ್ಟಿಯಾಗುತ್ತಿದೆ ವರ್ತಕ ಸಂಘದ ನೇತೃತ್ವದಲ್ಲಿ ಹೋರಾಟದ ಎಚ್ಚರಿಕೆ:

ವಿದ್ಯುತ್ ಬವಣೆ ಬಗೆಹರಿಸುವ ಯಾವುದೇ ಪ್ರಯತ್ನಗಳು ಕಂಡು ಬಾರದಿರುವ ಹಿನ್ನೆಲೆಯಲ್ಲಿ ಹೊಸನಗರದ ವರ್ತಕ ಸಂಘವು ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗಿದೆ. ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಮೆಸ್ಕಾಂ ಜಿಲ್ಲಾ ವರಿಷ್ಟ, ಸೂಪರಿಟೆಂಡೆಂಟ್ ಎಂಜಿನಿಯರ್ (ಎಸ್‌ಇ) ಜಯದೇವಪ್ಪ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಲಾಗಿದೆ. ಇದೇ ರೀತಿಯ ಅಸಮರ್ಪಕ ವಿದ್ಯುತ್ ವ್ಯವಸ್ಥೆಯೇ ಮುಂದುವರಿದರೆ ಸಾಮೂಹಿಕವಾಗಿ ವಿದ್ಯುತ್ ಬಿಲ್ ಪಾವತಿ ತಡೆ ಹಿಡಿದು ಪ್ರತಿಭಟನೆ ನಡೆಸುವ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಹೊಸನಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನವನ್ನೂ ಸೆಳೆಯಲಾಗಿದ್ದು, ಸಮಸ್ಯೆ ಬಗೆಹರಿಯದಿದ್ದರೆ ದೊಡ್ಡಮಟ್ಟದಲ್ಲಿ ಹೋರಾಟಕ್ಕೆ ತಾಲೂಕು ಸಜ್ಜಾಗುತ್ತಿದೆ.

ಪ್ರಸ್ತುತ ತಾಲೂಕಿನಲ್ಲಿ ಸ್ಫೋಟಗೊಂಡಿರುವ ಅಸಮಾಧಾನ ಮತ್ತು ವರ್ತಕರ ಆಸಕ್ತಿಯನ್ನು ಗಮನಿಸಿದಾಗ ಹೊಸನಗರದಲ್ಲಿ ಸಮರ್ಪಕ ವಿದ್ಯುತ್ ಗಾಗಿ ಹಗಲಿರುಳು ಗಟ್ಟಿ ಧ್ವನಿ ಮೊಳಗುವ ದಿನ ದೂರವಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು