Advertisement

Responsive Advertisement

ಭದ್ರಾವತಿಯಲ್ಲಿ ಗಣಪತಿ ವಿಸರ್ಜನೆ ವೇಳೆ ದುರಂತ: ದೇವರಹಳ್ಳಿ ಕೆರೆಯಲ್ಲಿ ಮುಳುಗಿ 20 ವರ್ಷದ ಯುವಕ ಸಾವು!

 

ಭದ್ರಾವತಿ (
ಶಿವಮೊಗ್ಗ): ಗಣೇಶ ಮೂರ್ತಿ ವಿಸರ್ಜನಾ ಸಂಭ್ರಮದ ಮೆರವಣಿಗೆ ವೇಳೆ ಕೆರೆಗೆ ಇಳಿದಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಭದ್ರಾವತಿ ತಾಲ್ಲೂಕಿನ ದೇವರಹಳ್ಳಿ ಕೆರೆಯಲ್ಲಿ ನಡೆದಿದೆ.

ರಂಗನಾಥಪುರ ಬಡಾವಣೆಯ ನಿವಾಸಿ ರಾಕೇಶ್ (20) ಮೃತಪಟ್ಟ ದುರ್ದೈವಿ ಯುವಕ ಎಂದು ಗುರುತಿಸಲಾಗಿದೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಹಾಗೂ ಸ್ನೇಹಿತರು ಈ ಆಕಸ್ಮಿಕ ಘಟನೆಯಿಂದ ಕಣ್ಣೀರ ಕಡಲಲ್ಲಿ ಮುಳುಗಿದ್ದಾರೆ.

ಘಟನೆಯ ವಿವರ: ಭದ್ರಾವತಿಯ ರಂಗನಾಥಪುರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಭಾನುವಾರ ರಾತ್ರಿ ವೈಭವದಿಂದ ಸಾಗಿತ್ತು. ತಡರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ಮೆರವಣಿಗೆಯು ದೇವರಹಳ್ಳಿ ಕೆರೆಯ ಬಳಿಗೆ ತಲುಪಿತ್ತು.

ಈ ಸಂದರ್ಭದಲ್ಲಿ ಗಣಪತಿ ಮೂರ್ತಿ ವಿಸರ್ಜನೆ ಮಾಡಲು ರಾಕೇಶ್ ಕೆರೆಯ ನೀರಿನೊಳಗೆ ಇಳಿದಿದ್ದರು. ಆದರೆ ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಹಠಾತ್ ನಾಪತ್ತೆಯಾಗಿದ್ದಾರೆ. ಜೊತೆಯಲ್ಲಿದ್ದವರು ರಕ್ಷಿಸಲು ಯತ್ನಿಸಿದರೂ ಕತ್ತಲಾಗಿದ್ದರಿಂದ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಬೆಳಿಗ್ಗೆ ಪತ್ತೆಯಾದ ಮೃತದೇಹ: ಘಟನೆ ಸಂಭವಿಸುತ್ತಿದ್ದಂತೆಯೇ ತಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಾತ್ರಿಯಿಡೀ ಕೆರೆಯಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರು. ಸೋಮವಾರ ಬೆಳಿಗ್ಗೆ ರಾಕೇಶ್ ಅವರ ಮೃತದೇಹ ನೀರಿನಿಂದ ಪತ್ತೆಯಾಗಿದ್ದು, ಮೇಲಕ್ಕೆತ್ತಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಭದ್ರಾವತಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಎಚ್ಚರಿಕೆ ಜಾಗರೂಕರಾಗಿರಿ (ನಮ್ಮ ಕಿವಿಮಾತು):ಅನಿಸಿಕೆ ನ್ಯೂಸ್ 

"ಗಣೇಶ ವಿಸರ್ಜನೆ ವೇಳೆ ಯುವಕರು ತಡರಾತ್ರಿ ಆಳವಾದ ಕೆರೆ, ನದಿಗಳಿಗೆ ಇಳಿಯುವಾಗ ಅತ್ಯಂತ ಜಾಗರೂಕರಾಗಿರಬೇಕು. ಸುರಕ್ಷತಾ ಕ್ರಮಗಳು ಹಾಗೂ ಲೈಫ್ ಜಾಕೆಟ್‌ಗಳ ಕೊರತೆ ಇಂತಹ ಅಮಾಯಕ ಜೀವಗಳ ಬಲಿ ಪಡೆಯುತ್ತಿರುವುದು ಆತಂಕಕಾರಿ."

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು